ಶ್ರೀಗಂಧದ ಮರ ಕಡಿದು ಕಳವು ಮಾಡಿದ್ದ ಓರ್ವ ವ್ಯಕ್ತಿಯ ಬಂಧನ. 26 ಕೆ.ಜಿ ತೂಕದ ಶ್ರೀಗಂಧ ಮರ ವಶ, ಮೌಲ್ಯ 37ಲಕ್ಷ.
- Advertisement -
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ಸರಹದ್ದಿನ ದೊಡ್ಡತೋಗೂರು ಗ್ರಾಮದಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:07/07/2024 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರ ಜಮೀನಿನಲ್ಲಿ ಪ್ರಕೃತಿದತ್ತವಾಗಿ ತಾನಾಗಿಯೇ ಒಂದು ಶ್ರೀಗಂಧದ ಸಸಿ ಬೆಳೆದು, ಸುಮಾರು 20 ಅಡಿ ಎತ್ತರದ ಮರವಾಗಿ ಬೆಳದಿರುತ್ತದೆ. ಫಿರಾದುದಾರರು ದಿನಾಂಕ:06/07/2024 ರಂದು ಸಂಜೆ ತೋಟವನ್ನು ಹಾಗೂ ತೋಟದಲ್ಲಿದ್ದ ಶ್ರೀಗಂಧದ ಮರವನ್ನು ನೋಡಿಕೊಂಡು ಮನೆಗೆ ಹೋಗಿರುತ್ತಾರೆ. ದಿನಾಂಕ:07/07/2024 ರಂದು ಮಧ್ಯಾಹ್ನ ತೋಟಕ್ಕೆ ಹೋಗಿ ನೋಡಲಾಗಿ, ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಯಾರೋ ಕಳ್ಳರು ಕತ್ತರಿಸಿಕೊಂಡು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಫಾರೆಸ್ಟ್ ಆಕ್ಟ್-1963ರ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣ ತನಿಖೆ ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬಾತ್ಮೀದಾರರಿಂದ ಮಾಹಿತಿಯನ್ನು ಕಲೆಹಾಕಿ, ದಿನಾಂಕ:25/07/2024 ರಂದು ಸಂಜೆ ಎಲೆಕ್ಟ್ರಾನಿಕ್ ಸಿಟಿಯ ವಿಟ್ಟಸಂದ್ರ ಗ್ರಾಮದ ರಸ್ತೆಯಲ್ಲಿ ಓರ್ವ ವ್ಯಕ್ತಿಯನ್ನು ಕಾರು ಸಮೇತ ಮತ್ತು ಕಾರಿನಲ್ಲಿದ್ದ ಆಯುಧಗಳ ಸಮೇತ ವಶಕ್ಕೆ ಪಡೆದು ಕೊಳ್ಳಲಾಯಿತು. ಆತನನ್ನು ವಿಚಾರಣೆ ಮಾಡಲಾಗಿ ಈ ಪ್ರಕರಣದಲ್ಲಿ ಶ್ರೀಗಂಧದ ಮರವನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ದಿನಾಂಕ:26/07/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ 4 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಆರೋಪಿಯು ಸುಮಾರು ಆರು ತಿಂಗಳ ಹಿಂದೆ ಬೆಂಗಳೂರಿನ ದೊಡ್ಡತೋಗೂರು ಗ್ರಾಮಕ್ಕೆ ಬೆಡ್‌ಶೀಟ್ ವ್ಯಾಪಾರ ಮಾಡಲು ಬಂದು, ಈ ಪ್ರಕರಣಕ್ಕೆ ಸಂಬಂಧಿಸಿದ ಶ್ರೀಗಂಧದ ಮರವನ್ನು ನೋಡಿಕೊಂಡು ಹೋಗಿದ್ದು, ತನ್ನ ಮನೆಯಲ್ಲಿ ಕಡುಬಡತನವಿದ್ದುದ್ದರಿಂದ, ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ, ತನ್ನ ಇಬ್ಬರು ಸ್ನೇಹಿತರೊಂದಿಗೆ ದಿನಾಂಕ:06/07/2024ರ ರಾತ್ರಿ ಈ ಕೃತ್ಯವೆಸಗಿರುವುದಾಗಿ ತಿಳಿಸಿರುತ್ತಾನೆ. ಈ ಪ್ರಕರಣದಲ್ಲಿ ಕಳವು ಮಾಡಿದ್ದ 26 ಕೆ.ಜಿ ತೂಕದ ಶ್ರೀಗಂಧದ ಮರದ ತುಂಡನ್ನು ಸದಾಶಿವನಗರ ಲೇಔಟ್, ಚಿಕ್ಕಕೊಂಡಗೋಳ ಗ್ರಾಮ, ಹಾಸನ ಜಿಲ್ಲೆಯಲ್ಲಿ ವಾಸವಿರುವ ಓರ್ವ ವ್ಯಕ್ತಿಗೆ ನೀಡಿದ್ದನ್ನು ದಿನಾಂಕ:04/08/2024 ರಂದು ವಶಪಡಿಸಿಕೊಳ್ಳಲಾಗಿರುತ್ತದೆ. ಇದರ ಮೌಲ್ಯ 37,00,000/-( ಏಳು ಲಕ್ಷ ರೂಪಾಯಿ).
ದಿನಾಂಕ:30/07/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ. ಪ್ರಕಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ. ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ.ಸಾರಾಫಾತೀಮಾ ರವರ ಮಾರ್ಗದರ್ಶನದಲ್ಲಿ, ಶ್ರೀ.ಮಂಜುನಾಥ್.ಆರ್ ಸಹಾಯಕ ಪೊಲೀಸ್ ಆಯುಕ್ತರು, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗ ರವರ ನೇತೃತ್ವದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ನವೀನ್ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
- Advertisement -
- Advertisement -
- Advertisement -
- Advertisement -