ದಿನಾಂಕ:17.06.2024 ರಂದು ಸಂಜೆ 06:00 ಗಂಟೆ ಸಮಯದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ಸರಹದ್ದಿನ ಪ್ರಗತಿನಗರ, ಚಿಕ್ಕತೋಗೂರು ಮುಖ್ಯರಸ್ತೆಯ ಹೋಟೆಲ್ ಮುಂಭಾಗ ಫಿಲ್ಯಾದಿಯ ಮಗ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಬಾಲಕನನ್ನು ಯಾರೋ ಅಪರಿಚಿತ ವ್ಯಕ್ತಿ ಅಪಹರಣ ಮಾಡಿರುತ್ತಾನೆಂದು, ನಂತರ ಅದೇ ದಿನ ರಾತ್ರಿ 09:18 ಗಂಟೆ ಸುಮಾರಿಗೆ ಆ ವ್ಯಕ್ತಿಯು ಫಿರಾದುದಾರರಿಗೆ ಫೋನ್ ಮಾಡಿ, ನಿನ್ನ ಮಗನು ನನ್ನ ಬಳಿ ಇರುತ್ತಾನೆ. 10 ಲಕ್ಷ ಹಣವನ್ನು ಕೊಟ್ಟರೆ ಮಗುವನ್ನು ಬಿಡುವುದಾಗಿ ಇಲ್ಲವಾದರೆ ಮಗುವನ್ನು ಕೊಲೆ ಮಾಡುವುದಾಗಿ ಮತ್ತು ಪೊಲೀಸರ ಬಳಿಗೆ ಹೋದರೆ ಮಗುವನ್ನು ಬಿಡುವುದಿಲ್ಲವೆಂದು ವಾಟ್ಸ್ ಆಪ್ ಮುಖಾಂತರ ಮೆಸೇಜ್ ಮಾಡಿರುತ್ತಾನೆ. ಈ ಕುರಿತು ಪಿರಾದುದಾರರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ಪ್ರಕರಣವನ್ನು ದಾಖಲಿಸಿರುತ್ತಾರೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಆತನ ಫೋನ್ ಕರೆಗಳ ಮಾಹಿತಿಯನ್ನು ಆಧರಿಸಿ ತಾಂತ್ರಿಕ ವಿಶ್ಲೇಷಣೆಯಿಂದ ದಿನಾಂಕ:18.06.2024 ರಂದು ಮಧ್ಯಾಹ್ನ 12:30 ಗಂಟೆಗೆ ಆರೋಪಿಯನ್ನು ಮತ್ತು ಅಪಹರಣಕ್ಕೊಳಗಾದ ಬಾಲಕನನ್ನು ಪ್ರಗತಿನಗರದಲ್ಲಿರುವ ಆಕ್ಟೋರಿಯಾ ಪಾರ್ಕ್ ಅಪಾರ್ಟ್ ಮೆಂಟ್‌ನಲ್ಲಿ ವಶಕ್ಕೆ ಪಡೆದು, ಅಪಹರಣಕ್ಕೊಳಗಾದ ಬಾಲಕನನ್ನು ಪಾಲಕರ ವಶಕ್ಕೆ ಒಪ್ಪಿಸಿರುತ್ತಾರೆ. ನಂತರ ಅದೇ ದಿನ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಲಾಗಿರುತ್ತದೆ. ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಆರೋಪಿಯು ಮೂಲತಃ ಜಾರ್ಖಂಡ್ ರಾಜ್ಯದವನಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಸರಹದ್ದಿನ ಪ್ರಗತಿನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿದ್ದು, ಆರೋಪಿಯು ಬಿಜಿನೆಸ್‌ನಲ್ಲಿ ನಷ್ಟ ಮಾಡಿಕೊಂಡು ಹಣಕಾಸಿನ ತೊಂದರೆಯಲ್ಲಿದ್ದು, ಅಲ್ಲದೇ ತನ್ನ ಚಟಗಳಿಗೆ ಹಾಗೂ ಹವ್ಯಾಸಕ್ಕೆ ಹಣಕಾಸಿನ ಅವಶ್ಯಕತೆ ಇದ್ದು, ಫಿರಾದಿಯ ಮಗನನ್ನು ಅಪಹರಣ ಮಾಡಿ ಸುಲಭವಾಗಿ ಹಣವನ್ನು ಗಳಿಸಬಹುದೆಂದು ಅಪರಹರಣ ಮಾಡಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಕಾರ್ಯಚರಣೆಯು ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಸಿ.ಕೆ.ಬಾಬಾ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಮಂಜುನಾಥ.ಆರ್ ರವರ ನೇತೃತ್ವದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಅಪಹರಣಕ್ಕೊಳಗಾದ ಬಾಲಕನನ್ನು ಮತ್ತು ಆರೋಪಿಯನ್ನು ಕೇವಲ 15 ಗಂಟೆಯೊಳಗೆ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.






