ಅನಾಮಧೇಯ ವ್ಯಕ್ತಿಯೊಬ್ಬ ಸರ್ಕಾರಿ ಅಧಿಕಾರಿಯೊಬ್ಬರಿಗೆ ಮೊಬೈಲ್‌ನಿಂದ ಕರೆ ಮಾಡಿ ತಾನು ಲೋಕಾಯುಕ್ತ ಇನ್ಸ್ಪೆಕ್ಟರ್ ಚಂದ್ರಶೇಖರ್ ಮಾತನಾಡುತ್ತಿರುವುದು. ನಮ್ಮ ಎಡಿಜಿಪಿ ಸಾಹೇಬರು ಮಾತನಾಡುತ್ತಾರೆ ಎಂದು ಹೇಳಿ, ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪಿಟಿಷನ್ ಇರುತ್ತದೆ. ಇದನ್ನು ವಿಚಾರಣೆ ಮಾಡದೇ ಇಲ್ಲೇ ಮುಕ್ತಾಯಗೊಳಿಸಬೇಕಾದರೆ ಹಣ ನೀಡಬೇಕಾಗುತ್ತದೆ. ನೀವು ಹಣ ಕೊಟ್ಟರೆ ಪಿಟಿಷನ್‌ನ್ನು ನಮ್ಮ ಟೆಕ್ನಿಕಲ್ ಟೀಂ ನಿಂದ ವಿಚಾರಣೆ ನಡೆಸಿ “ಬಿ” ರಿಪೋರ್ಟ್ ಸಲ್ಲಿಸಲಾಗುವುದು ಎಂದು ತಿಳಿಸಿ, ಹಣಕ್ಕಾಗಿ ಬೇಡಿಕೆ ಇಟ್ಟು ಸರ್ಕಾರಿ ಅಧಿಕಾರಿಗಳು ಸರ್ಕಾರಿ ಕೆಲಸ ಮಾಡದಂತೆ ಮಾನಸಿಕವಾಗಿ ತೊಂದರೆ ನೀಡುತ್ತಿರುವ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಸಿಸಿಬಿ ಪೊಲೀಸರು, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದುಕೊಂಡಿರುತ್ತಾರೆ. ವಿಚಾರಣಾ ಕಾಲದಲ್ಲಿ ಈತನು ತಾನೇ ಲೋಕಾಯುಕ್ತ ಇನ್ಸ್ಪೆಕ್ಟರ್ ಚಂದ್ರಶೇಖರ್ ಎಂದು ಮಾತನಾಡಿದ್ದು ಮತ್ತು ಕೇಶವರಾವ್, ಎಡಿಜಿಪಿ ರವರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ, ಹೆದರಿಸಿ ಹಣ ವಸೂಲು ಮಾಡಲು ಪ್ರಯತ್ನಿಸಿರುವುದಾಗಿ ಒಪ್ಪಿಕೊಂಡಿರುತ್ತಾನೆ.
ಈತನು ಈ ಹಿಂದೆ ಆಂಧ್ರಪ್ರದೇಶ ರಾಜ್ಯದಲ್ಲಿಯೂ ಸಹ ಸರ್ಕಾರಿ ನೌಕರರಿಗೆ ಇದೇ ರೀತಿ ಕರೆ ಮಾಡಿ, ಬೆದರಿಸಿ ಹಣ ವಸೂಲಿ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಈತನು ಬೆಂಗಳೂರಿನ ಸಿದ್ದಾಪುರ, ಹೈಗೌಂಡ್ಸ್ ಮತ್ತು ಆಂಧ್ರದ ಅನಂತಪುರ ಜಿಲ್ಲೆಯ ಟೂ ಟೌನ್ ಹಾಗೂ ರಾಜ್‌ಮಂಡ್ರಿಯ ತ್ರಿಟೌನ್ ಪೊಲೀಸ್ ಠಾಣೆಗಳಲ್ಲಿ ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಹಣ ವಸೂಲಿ ಮಾಡಿದ ಪ್ರಕರಣಗಳು ದಾಖಲಾಗಿರುತ್ತವೆ. ಅಲ್ಲದೆ ಈತನ ವಿರುದ್ಧ ಬೆಂಗಳೂರು ನಗರದಲ್ಲಿನ ಠಾಣೆಗಳಾದ ಬೇಗೂರು, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೆಬ್ಬಗೋಡಿ, ಜಿಗಣಿ, ಸೂರ್ಯಸಿಟಿ, ಕೋಲಾರ ಟೌನ್ ಗಳಲ್ಲಿ ಮನೆ ಕಳವು ಪ್ರಕರಣಗಳು ದಾಖಲಾಗಿರುತ್ತವೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಉಪ ಪೊಲೀಸ್ ಆಯುಕ್ತರು, ಅಪರಾಧ-2 ರವರ ಮಾರ್ಗದರ್ಶನದಲ್ಲಿ, ಸಂಘಟಿತ ಅಪರಾಧ ದಳ (ಪೂರ್ವ) ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.






