ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಇತರೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ-2026ರ ಸಮಾರೋಪ ಸಮಾರಂಭವನ್ನು ದಿನಾಂಕ: 05/02/2026 ರಂದು ಬೆಂಗಳೂರಿನ ಅರಮನೆ ಮೈದಾನದ ರಾಯಲ್ ಸೆನೆಟ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ರಸ್ತೆ ಅಪಘಾತಗಳ ತನಿಖೆಯನ್ನು ತಾಂತ್ರಿಕವಾಗಿ ಬಲಪಡಿಸುವ ಹಾಗೂ ಅಪಘಾತ ಸಂತ್ರಸ್ತರಿಗೆ ವಿಮಾ ಪರಿಹಾರ ಮತ್ತು ನ್ಯಾಯವನ್ನು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ‘ಇ-ಡಿಎಆರ್’ (e-DAR – Electronic Detailed Accident Report) ಎಂಬ ನೂತನ ಡಿಜಿಟಲ್ ತಂತ್ರಜ್ಞಾನವನ್ನು ಜಾರಿಗೆ ತರಲಾಗುತ್ತಿದೆ.
ಉದ್ಘಾಟನಾ ಸಮಾರಂಭ: (ಬೆಳಿಗ್ಗೆ 10:00 ಗಂಟೆಗೆ)
ದಿನಾಂಕ:05/02/2026 ರಂದು ಬೆಳಿಗ್ಗೆ 10:00 ಗಂಟೆಗೆ, ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ.ರಾಮಲಿಂಗಾ ರೆಡ್ಡಿಯವರು e-DAR (ಎಲೆಕ್ಟ್ರಾನಿಕ್ ವಿಸ್ತ್ರತ ಅಪಘಾತ ವರದಿ) ಅನುಷ್ಠಾನ ಹಾಗೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026ರ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸದರೀ ಕಾರ್ಯಕ್ರಮವು ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ರವರ ಘನ ಉಪಸ್ಥಿತಿ ವಹಿಸಲಿದ್ದು, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ.ದಿನೇಶ್ ಗುಂಡೂರಾವ್, ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀ.ಸತೀಶ್ ಜಾರಕಿಹೋಳಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕರಾದ ಶ್ರೀ ಸಿ.ಎನ್. ಅಶ್ವತ್ಥ ನಾರಾಯಣ ರವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಸ್ತು ಪ್ರದರ್ಶನ, ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ, ಚರ್ಚೆ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಸದರೀ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಶ್ರೀ ಅಭಯ್ ಮನೋಹರ್ ಸಪ್ರೆ, ಅಧ್ಯಕ್ಷರು, ಸರ್ವೋಚ್ಚ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿ ಹಾಗೂ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು, ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಕಾನೂನು, ಪತ್ರಿಕೋದ್ಯಮ, ಸ್ನಾತಕೋತ್ತರ ವಿದ್ಯಾರ್ಥಿಗಳು, ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇತರೆ ಆಹ್ವಾನಿತರಿಗೆ ರಸ್ತೆ ಸುರಕ್ಷತೆ ಜಾಗೃತಿ ಮತ್ತು ರಸ್ತೆ ಅಪಘಾತಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಕುರಿತು ಉಪನ್ಯಾಸ ನೀಡಲಿದ್ದಾರೆ.
ಒಂದು ಮುಖ್ಯ ವೇದಿಕೆ ಹಾಗೂ ಎರಡು ಉಪವೇದಿಕೆಗಳನ್ನು ಹೊಂದಿರುವ ಈ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಹಾಗೂ e-DAR ಅನುಷ್ಠಾನ ಕುರಿತು ಅರಿವು ಮೂಡಿಸಲು ವಿವಿಧ ಕ್ಷೇತ್ರಗಳ ಪರಿಣಿತರು, ನುರಿತ ವೈದ್ಯರು, ಸರ್ಕಾರೇತರ
ವಸ್ತು ಪ್ರದರ್ಶನದಲ್ಲಿ ಸುಮಾರು 40 ಮಳಿಗೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ರಸ್ತೆ ಸುರಕ್ಷತೆ, e-DAR ಅನುಷ್ಠಾನ, ವಾಹನ ಡೀಲರ್ಗಳು ಹಾಗೂ ವಾಹನ ತಯಾರಕರು ಇತ್ತೀಚಿನ ಆಟೋಮೊಬೈಲ್ ತಂತ್ರಜ್ಞಾನ, ರಸ್ತೆ ಸುರಕ್ಷತೆಗೆ ಸಂಬಂಧಪಟ್ಟ ಪೌರ ಸಂಸ್ಥೆಗಳ ಸಹಯೋಗದಲ್ಲಿ ಮಳಿಗೆಗಳನ್ನು ಸ್ಥಾಪಿಸಲಿದ್ದಾರೆ. ಇದಲ್ಲದೆ ಗ್ರೀನ್ ಎನರ್ಜಿ ಆಧಾರಿತ ಹಾಗೂ ಹೈ-ಎಂಡ್ ಇಲೆಕ್ಟಿಕ್ ವಾಹನಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರ ಅರಿವು ಮೂಡಿಸಲು ಅಪಘಾತಕ್ಕೊಳಗಾದ ವಾಹನಗಳು, ಅಪಘಾತ ಸಂದರ್ಭದಲ್ಲಿ ನೀಡಬಹುದಾದ ಪ್ರಥಮ ಚಿಕಿತ್ಸೆ, ಹೆಲೈಟ್ ಬಳಕೆ ಮತ್ತು ಸೀಟ್ ಬೆಲ್ಟ್/ಚೈಲ್ಡ್ ಸೀಟ್ ಬಳಕೆಯ ಕುರಿತು ಮಾಹಿತಿ ಪ್ರದರ್ಶನವೂ ಒಳಗೊಂಡಿರುತ್ತದೆ.
ಸಮಾರೋಪ ಸಮಾರಂಭ (ಸಂಜೆ 05:00 ಗಂಟೆಗೆ)
ಸಮಾರೋಪ ಸಮಾರಂಭವು ಸಂಜೆ 5:00 ಗಂಟೆಗೆ ಆರಂಭವಾಗಲಿದ್ದು, ಮಾನ್ಯ ಶ್ರೀ ವಿಬೂ ಬಾು, ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ, ಶ್ರೀ ಅಭಯ್ ಮನೋಹರ್ ಸಪ್ರೆ, ಅಧ್ಯಕ್ಷರು, ಸರ್ವೋಚ್ಚ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿ ಹಾಗೂ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು, ಶ್ರೀಮತಿ ಅನು ಶಿವರಾಮನ್, ಗೌರವಾನ್ವಿತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ, ಹಾಗೂ ಕಾರ್ಯನಿರ್ವಹಣಾ ಆಡಳಿತ, ತುರ್ತು ಸೇವೆಗಳು ಮತ್ತು ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು, ಪಾಲುದಾರ ಇಲಾಖೆಗಳ ಅಧಿಕಾರಿಗಳು ಹಾಗೂ ಇತರೆ ಆಹ್ವಾನಿತರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಹಾಗೂ ಜಾಗೃತಿ ಕುರಿತು ಕಲಾವಿದರು ಮತ್ತು ಕಲಾ ತಂಡಗಳಿಂದ ಭಿತ್ತಿಪತ್ರಗಳ ಪ್ರದರ್ಶನ, ವಿಂಟೇಜ್ ಕಾರುಗಳ ಪ್ರದರ್ಶನ, ವಿವಿಧ ಇಲಾಖೆಗಳು ಮತ್ತು ಕಂಪನಿಗಳ ರಸ್ತೆ ಸುರಕ್ಷತಾ ಮಳಿಗೆಗಳು, ಅಪಘಾತಕ್ಕೊಳಗಾದ ವಾಹನಗಳು ಹಾಗೂ ವಾಹನ ತಯಾರಿಕಾ ಸಂಸ್ಥೆಗಳ ವಿವಿಧ ಮಾದರಿ ವಾಹನಗಳ ಪ್ರದರ್ಶನ ನಡೆಯಲಿದೆ.
2026ರ ಸಾಲಿನಲ್ಲಿ ರಸ್ತೆ ಸುರಕ್ಷತೆ ಕೇವಲ ಎಚ್ಚರಿಕೆಯ ಫಲಕಗಳಿಗೆ ಸೀಮಿತವಾಗಿರದೆ, ತಂತ್ರಜ್ಞಾನ ಮತ್ತು ಮಾನವೀಯ ಕಾಳಜಿಯ ಸಮನ್ವಯವಾಗಿದ್ದು, ಈ ವರ್ಷದ ಪ್ರಮುಖ ಪರಿಕಲ್ಪನೆಯಾಗಿ ‘ಇ-ಡಿಎಆರ್’ ನಂತಹ ಡಿಜಿಟಲ್ ವ್ಯವಸ್ಥೆಗಳ ಸಂಪೂರ್ಣ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ. ಈ ವ್ಯವಸ್ಥೆಯು ಅಪಘಾತದ ದತ್ತಾಂಶಗಳನ್ನು ಕ್ಷಣಮಾತ್ರದಲ್ಲಿ ವಿಶ್ಲೇಷಿಸಿ, ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಸಹಕಾರಿಯಾಗಲಿದೆ.
ಈ ಸಾಲಿನ ಸುರಕ್ಷತಾ ಮಂತ್ರವಾಗಿ “ತಂತ್ರಜ್ಞಾನದೊಂದಿಗೆ ಸುರಕ್ಷಿತ ಪ್ರಯಾಣ” ಎಂಬ ಘೋಷಣೆಯನ್ನು ಅಳವಡಿಸಿಕೊಳ್ಳಲಾಗಿದೆ. ಸ್ಮಾರ್ಟ್ ಸಿಗ್ನಲ್ಗಳು, ಕೃತಕ ಬುದ್ಧಿಮತ್ತೆ (AI) ಆಧಾರಿತ ಸಂಚಾರ ನಿಯಂತ್ರಣ ವ್ಯವಸ್ಥೆಗಳು ಹಾಗೂ ವಾಹನಗಳ ನಡುವಿನ ಸಂವಹನ ತಂತ್ರಜ್ಞಾನಗಳ ಮೂಲಕ ರಸ್ತೆ ಅಪಘಾತಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಕೇವಲ ದಂಡ ವಿಧಿಸುವುದಕ್ಕಿಂತಲೂ ಹೆಚ್ಚು, ಸಂಚಾರ ನಿಯಮಗಳ ಪಾಲನೆಯನ್ನು ಜನಜೀವನದ ಒಂದು ಭಾಗವಾಗಿಸಲು ಸರ್ಕಾರ ಮುಂದಾಗಿದೆ.
ಶಾಲಾ ಪಠ್ಯಕ್ರಮದಲ್ಲಿ ರಸ್ತೆ ಸುರಕ್ಷತೆಯನ್ನು ಅಳವಡಿಸುವುದು ಹಾಗೂ ಯುವಜನತೆಯಲ್ಲಿ ಜವಾಬ್ದಾರಿಯುತ ಚಾಲನೆಯ ಕುರಿತು ಅರಿವು ಮೂಡಿಸುವುದು ಈ ವರ್ಷದ ಅಭಿಯಾನದ ಪ್ರಮುಖ ಅಂಶವಾಗಿದೆ. ಪ್ರತಿಯೊಬ್ಬ ನಾಗರಿಕನೂ “ಸುರಕ್ಷತೆಯ ರಾಯಭಾರಿ” ಆಗುವ ಮೂಲಕ 2026ನೇ ವರ್ಷವನ್ನು ಅಪಘಾತಮುಕ್ತ ವರ್ಷವನ್ನಾಗಿ ರೂಪಿಸುವ ಸಂಕಲ್ಪವನ್ನು ಈ ಅಭಿಯಾನ ಹೊಂದಿದೆ.






