HomeNewsಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ; ತುರ್ತು ಅಧಿವೇಶನ ಕರೆಯಲು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ; ತುರ್ತು ಅಧಿವೇಶನ ಕರೆಯಲು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

- Advertisement -spot_img

ಸಂಪೂರ್ಣ ತನಿಖೆ ಬಗ್ಗೆ ಹಾಗೂ ಭವಿಷ್ಯದಲ್ಲಿ ಇಂತಹ ದುರಂತ ತಪ್ಪಿಸಲು ಚರ್ಚಿಸಬೇಕಿದೆ

ಬೆಂಗಳೂರು, ಜೂನ್‌ 15

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಈ ದುರ್ಘಟನೆಯು ಸಾರ್ವಜನಿಕ ಸುರಕ್ಷತೆ, ಗುಂಪು ನಿಯಂತ್ರಣ, ಕ್ರೀಡಾ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಈ ದುರಂತ ಜನರಲ್ಲಿ ಆತಂಕ ಮತ್ತು ಕಳವಳ ಉಂಟುಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಆಡಳಿತದಲ್ಲಿ ಆಗಿರುವ ಲೋಪಗಳು, ಘಟನೆ ನಂತರ ಸರ್ಕಾರದ ಕ್ರಮಗಳು ಅನೇಕ ಸಂಶಯಗಳನ್ನು ಹುಟ್ಟುಹಾಕಿದೆ. ಕಾಲ್ತುಳಿತಕ್ಕೆ ಕಾರಣರಾದ ಬಲಾಢ್ಯರನ್ನು ರಕ್ಷಿಸಲಾಗುತ್ತಿದೆ. ಸತ್ಯವನ್ನು ಮರೆಮಾಚಲು ಮೂರು ರೀತಿಯ ತನಿಖೆಗಳನ್ನು ಮಾಡಲಾಗುತ್ತಿದೆ. ಅಸಹಾಯಕ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ ಎಂದು ಅವರು ದೂರಿದ್ದಾರೆ.

ಭವಿಷ್ಯದಲ್ಲಿ ಇಂತಹ ದುರ್ಘಟನೆಯನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ಚರ್ಚೆಯ ಅಗತ್ಯವಿದೆ. ಇದಕ್ಕಾಗಿ ಮೂರು ದಿನಗಳ ತುರ್ತು ಅಧಿವೇಶನ ಕರೆಯಬೇಕಿದೆ. ಕಾಲ್ತುಳಿತ ಘಟನೆಗೆ ಕಾರಣವಾದ ಸಂದರ್ಭಗಳ ಸಂಪೂರ್ಣ ತನಿಖೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗುಂಪು ನಿಯಂತ್ರಣ ಮತ್ತು ಸುರಕ್ಷತಾ ಕ್ರಮಗಳ ಬಲವರ್ಧನೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಪರಿಹಾರದ ವ್ಯವಸ್ಥೆ, ಭವಿಷ್ಯದಲ್ಲಿ ಇಂತಹ ಘಟನೆ ತಪ್ಪಿಸಲು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಈ ತುರ್ತು ಅಧಿವೇಶನವು ರಾಜ್ಯ ಸರ್ಕಾರ ಬದ್ಧತೆಯನ್ನು ಜನರಿಗೆ ತೋರಿಸಲು ಮತ್ತು ದುರಂತದಿಂದ ಕಲಿತ ಪಾಠಗಳ ಆಧಾರದಲ್ಲಿ ಭವಿಷ್ಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗಲಿದೆ. ಹಾಗೆಯೇ ಘಟನೆಗೆ ಕಾರಣಗಳೇನು ಎಂಬುದನ್ನು ಜನತೆಗೆ ತಿಳಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here